Saturday, October 23, 2010

ನಿನ್ನ ಮೌನದ ನಾನು...!

"ನಿನ್ನ ಮೌನಕ್ಕೊಂದು ಪತ್ರ"

        ಇದು ನಿನಗೆ ಬರೆಯುತ್ತಿರುವ ಪ್ರಥಮ ಪತ್ರ... ಇಲ್ಲಿಯವರೆಗೆ, ಕಟ್ಟಿರುವ ಆಣೆಕಟ್ಟನ್ನು ಭೇದಿಸಲಾಗದೆ ಅದರಾಚೆ ಅವಿತಿಟ್ಟುಕೊಂಡ ಅಥವಾ ಬಲವಂತವಾಗಿ ಅವಿತಿಡಲ್ಪಟ್ಟ ಭಾವನೆಗಳೆಂಬ ಮಹಾಪೂರ ಆಣೆಕಟ್ಟಿನ ಆಳವನ್ನು ಎತ್ತರವನ್ನೂ ಮೀರಿ ನಿಂತಾಗ ಮತ್ತೇನೂ ತೋಚದೆ ಆಚೆ ಬಿದ್ದ ಪ್ರತಿಯೊಂದು ಹನಿಯನ್ನೂ ಅಕ್ಷರಗಳ ರೂಪದಲ್ಲಿ ನಿನ್ನೆಡೆಗೆ ಕಳುಹಿಸಿರುವೆ ನಾನು..ಸ್ವೀಕರಿಸುವೆಯಾ ನೀನು..???
  
        ಓ...... ಇಲ್ಲೇ ನೀನು ನನಗೆ ಸಮಸ್ಯೆಯಾಗುವೆ! ನಿನ್ನ ನೋಡಿದಾಗಿನಿಂದ ನಿನ್ನೊಡನಿರುವ ಸ೦ಬ೦ಧಕ್ಕೆ ಕೊಡುವ ಸೂಕ್ತ ಹೆಸರಿಗಾಗಿ ಹುಡುಕಾಡಿ ಸೋತಿದ್ದೇನೆ. ನಿನ್ನನ್ನು ಸಂಬೋಧಿಸಲು ನನ್ನಲ್ಲಿ ನಿರ್ದಿಷ್ಟ ಅಕ್ಷರಗಳಿಲ್ಲ..ಎಲ್ಲ ಸಂಬೋದನೆಗೂ, ಎಲ್ಲ ಸಂಭಂಧಕ್ಕೂ, ಸ್ನೇಹಕ್ಕೂ, ಪ್ರೀತಿಗೂ ಮೀರಿ ನಿಂತ ಭುವಿ ಬಾನಿಗಿಂತಲೂ ವಿಶಾಲವಾದ ನಮ್ಮ ಸ೦ಬ೦ಧಕ್ಕೆ ಏನೆಂದು ಹೆಸರಿಡಲಿ .. ಹೇಳು!?

        ಕಾರಣವಿಲ್ಲದೆ ನನ್ನನ್ನು ಬಹಳ ಕಾಡಿಸುವೆ ನೀನು! ಕಣ್ಣೆದುರಿಗೆ ಕಂಡರೂ ಕೈಗೆ ಸಿಗದ ಕಡು ವಿಚಿತ್ರ ನೀನು.. ನಿನ್ನ ಪ್ರತಿ ಸೋಲಿಗೂ ಅಳುವ ಪ್ರತಿ ಗೆಲುವಿಗೂ ಅಭಾರಿಯಾದ, ನನ್ನ ಎಲ್ಲ ಸೋಲಿಗೂ, ಎಲ್ಲ ಗೆಲುವಿಗೂ ನಿನ್ನ ಮೌನವೊಂದೇ ಸಾಂತ್ವನ ಹಾಗೂ ಅಭಿನಂದನೆಯಾಯಿತೇಕೆ?? ನನ್ನ ಪ್ರತಿಯೊಂದು ಕಣ್ಪನಿಗೂ, ಪ್ರತಿ ನಗೆ ಬುಗ್ಗೆಗೂ, ನಿನ್ನೊಡನೆ ತೋಡಿಕೊಂಡ ನನ್ನೆಲ್ಲ ನೋವು ನಲಿವುಗಳಿಗೂ ನೀನು ಕುರುಡಾಗಿ, ಕಿವುಡಾಗಿ, ಮೂಕವಾಗಿ ಕುಳಿತಿದ್ದೇಕೆ... ಹೇಳು!

        ನನ್ನೆಲ್ಲ ಕನಸುಗಳಿಗೆ ಸ್ಪೂರ್ತಿಯಾಗುವ, ಸಮಸ್ಯೆಗಳಿಗೆಲ್ಲ ಪರಿಹಾರ ಸೂಚಿಸುವ, ನನ್ನೆಲ್ಲ ದುಃಖ ದುಮ್ಮಾನಗಳಿಗೆ ಹೆಗಲೊಡ್ಡುವ, ಗೆಲುವಿಗೆಲ್ಲ ಚಪ್ಪಾಳೆಯಾಗುವ, ನನ್ನಲ್ಲಿಯ ಇಂಗದ ಉತ್ಸಾಹಕ್ಕೆ ಇಂಬು ನೀಡುವ, ನನ್ನ ಕಣ್ಣಂಚಿನ ಕಾಂತಿಯಾದ, ನನ್ನೆಲ್ಲ ಕಾರ್ಯಕ್ಕೆ ಪ್ರೇರಕ ಹಾಗೂ ಪೂರಕ ಶಕ್ತಿಯಾದ ಈ ನಿನ್ನ 'ಮೌನ'ವನ್ನು ನಾನೆಂತು ಬಣ್ಣಿಸಲಿ ಹೇಳು.. ನಮ್ಮೀ ಸಂಭಂಧದ ಗಾಢತೆಗೆ ನಿಕಟತೆಗೆ ಕಾರಣೀಭೂತವಾದ ಈ ನಿನ್ನ 'ಮೌನ'ಕ್ಕೆ ನನ್ನ ಕ್ರತಜ್ನತೆಯನ್ನು ವಿವರಿಸಲು ಬಹುಷಃ ಕಾಳಿದಾಸ ಮರುಜನ್ಮ ಪಡೆಯಬೇಕಾದೀತು!!!

         ನನ್ನ ಪರಿಧಿ 'ಮನೆ' ಎಂಬ ಪ್ರಪಂಚಕ್ಕಷ್ಟೇ ಸೀಮಿತ.. ನಿನ್ನ ಪರಿಧಿ 'ಪ್ರಪಂಚ'ವೇ ಒಂದು ಮನೆಯಾದಷ್ಟು ವಿಶಾಲ. ಅದೆಲ್ಲ ನಮ್ಮ ಆಪ್ತತೆಯ ಎದುರು  ಗೌಣವಾದದ್ದು ವಿಚಿತ್ರವೆನಿಸುತ್ತದೆ ನನಗೆ..ನನ್ನ ರೆಪ್ಪೆಯಡಿಯ ಕತ್ತಲೆಯಲ್ಲಿ ಹೊ೦ಬೆಳಕಾಗಿ ಅದೆಂದು ಬಂದು ಸೇರಿದೆ??ನನ್ನ ಹೆರಳಲ್ಲಿಯ ಮುಂಗುರುಳಾಗಿ ಏಕೆ ಬಂದೆ..? ನನ್ನ ಅಧರದಲ್ಲಿಯ ರಂಗು ನೀನಾದೆ.. ಹೇಗೆ??

         ನನ್ನಲ್ಲಿಯ ಕಠಿಣತೆಯನ್ನು  ಕಳೆದು ಮ್ರದುವಾಗಿಸಿದ, ನನ್ನ ವಿಚಾರ ಲಹರಿಗೆ ಹೊಸ ಭಾಷ್ಯ ಬರೆಸಿದ, ನನ್ನ ಸಾಹಿತ್ಯಕ್ಕೆ ಪ್ರೇರಣೆಯಾದ, ನನ್ನ ಮುಷ್ಟಿಯಗಲದ ಹ್ರದಯದಲ್ಲಿ ತಡೆಯಿಲ್ಲದೆ ಓಡಾಡುವ, ನನ್ನ ಜೀವಕ್ಕೆ ಸಂಜೀವಿನಿಯಾದ, ನನ್ನ ಬದುಕೆಂಬ ಪುಸ್ತಕದ ಮುನ್ನುಡಿಯಾದ, ನೀನು..ನನಗೆ ಯಾರು??? ಎಂಬ ಪ್ರಶ್ನೆಗೆ ಏನೆಂದು ಉತ್ತರಿಸಲಿ.. ಹೇಳು!!!

          ನಮ್ಮ ಅನಂತ, ಎಣೆಯಿಲ್ಲದ ಸಂಬಂಧವನ್ನು ನಿನ್ನೆರಡು ಅಧರಗಳ ಆಲಿ೦ಗನದಿ೦ದಾದ 'ಮೌನ' ದಲ್ಲಿ ಮಾತ್ರ ಏಕೆ ಹಿಡಿದಿಟ್ಟಿರುವೆ..? ನೀನು ತುಟಿ ತೆರೆಯೆ ಅದು ಜಾರಿ ಹೋಗುವುದನ್ನು, ನೀನು ನನಗೆ ಬರೀ ಶೂನ್ಯವಾಗುವುದನ್ನು ನಾ ಹೇಗೆ ಸಹಿಸಲಿ...ಹೇಳು?? ನಿನ್ನ ಮೌನದಿಂದೀಚೆಯ ಪ್ರಪಂಚದಲ್ಲಿ ನೀನು ನನಗೆ ಎಲ್ಲಾ..!! ಮೌನ ಮುರಿದರೆ ನೀ ಎನಗೆ ಏನೂ ಅಲ್ಲ..ಏಕೆ?! ನಮ್ಮ  ಅವಿನಾಭಾವ ಸಂಬಂಧ ನಿನ್ನ ಮೌನಕ್ಕಷ್ಟೇ ಸೀಮಿತವೇಕೆ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಮುರಿಯದ ಮೌನದೊಂದಿಗೆ ಬರುವೆಯಷ್ಟೇ.....???

                                                                                           ಇಂತಿ ನಿನ್ನ ತಿರಸ್ಕಾರ ಸಹಿಸದ,
                                                                                                 'ನಿನ್ನ ಮೌನದ ನಾನು'.

No comments:

Post a Comment